ಗುರುದತ್ತ
1925-64. ಹಿಂದಿ ಚಿತ್ರರಂಗದಲ್ಲಿ ಪ್ರಸಿದ್ಧಿಯ ಶಿಖರವೇರಿದ ನಟ, ನಿರ್ದೇಶಕ ಹಾಗೂ ನಿರ್ಮಾಪಕ. ಕನ್ನಡಿಗರಾದ ಇವರು 1925 ಜುಲೈ 9ರಂದು ಮೈಸೂರಿನಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣ ಕೊಲ್ಕತ್ತದಲ್ಲಿ ಪೂರೈಸಿದರು. ಅನಂತರ ಹೆಸರಾಂತ ನೃತ್ಯ ಪಟು ಉದಯಶಂಕರರ ಬಳಿ ನೃತ್ಯಾಭ್ಯಾಸ ಮಾಡಿದರು. ಪ್ರಭಾತ ಸ್ಟುಡಿಯೋದಲ್ಲಿ ನೃತ್ಯಸಂಯೋಜಕರಾಗಿ ಚಲನಚಿತ್ರರಂಗ ಪ್ರವೇಶಿಸಿದರು. ಅಲ್ಲಿ ಹಿಂದಿ ಚಿತ್ರರಂಗದ ಹೆಸರಾಂತ ನಟ ದೇವಾನಂದರ ಪರಿಚಯ ಗೆಳೆತನ ಲಭಿಸಿತು. ಹಮ್ ಏಕ್ ಹೈ ಚಿತ್ರದ ನೃತ್ಯ ಸಂಯೋಜಕರಾಗಿ ಕೆಲಸ ಮಾಡಿದರು (1946). ಮುಂದೆ ಇವರು ಬಾಂಬೆ ಟಾಕೀಸ್ ಸೇರಿದರು. ಸಹ ನಿರ್ದೇಶಕರಾಗಿ ಲಖರಾನಿ (1945), ಮೋಹನ (1947), ಗಲ್ರ್ಸ್ ಸ್ಕೂಲ್ (1949), ಸಂಗ್ರಾಮ (1950) ಚಲನಚಿತ್ರಗಳಲ್ಲಿ ಕೆಲಸ ಮಾಡಿದರು. ದೇವಾನಂದ್ 1950ರಲ್ಲಿ ನವಕೇತನ ಸಂಸ್ಥೆ ಆರಂಭಿಸಿದರು. ಹಿಂದೆ ಇವರಿಗೆ ಕೊಟ್ಟ ಮಾತಿನಂತೆ ತಮ್ಮ ಪ್ರಥಮ ನಿರ್ಮಾಣದ ಚಿತ್ರ ನಿರ್ದೇಶಿಸಲು ಅವಕಾಶ ಕಲ್ಪಿಸಿದರು. ಗುರುದತ್ ನಿರ್ದೇಶಿಸಿದ ಪ್ರಥಮ ಚಿತ್ರ ಬಾಜಿ (1951). ಇದು ಇವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತು. ಅನಂತರ ಜಾಲ್ ಚಿತ್ರವನ್ನು ನಿರ್ದೇಶಿಸಿದರು (1952). ಇದೊಂದು ಹೊಸ ಬಗೆಯ ಕುತೂಹಲ ಮೂಡಿಸುವ ಚಿತ್ರ. ಅದಾದ ಬಳಿಕ ಸೈಲಾಬ್ ಎಂಬ ಚಿತ್ರ ನಿರ್ದೇಶಿಸಿದರು (1956).

	ನಿರ್ಮಾಪಕ, ನಟ, ನಿರ್ದೇಶಕರಾಗಿ ತಮ್ಮನ್ನು ತೊಡಗಿಸಿಕೊಂಡು ಎಚ್.ಜಿ. ಫಿಲ್ಮ್ ಲಾಂಛನದಲ್ಲಿ ಬಾಜ್ ಚಿತ್ರ ನಿರ್ಮಿಸಿದರು (1953). ಇದರಲ್ಲಿ ಗೀತಾಬಾಲಿಯೊಂದಿಗೆ ತಾವೇ ನಾಯಕರಾಗಿ ಅಭಿನಯಿಸಿದರು. ಅನಂತರ ಇವರು ಹಲವು ಚಿತ್ರಗಳನ್ನು ನಿರ್ದೇಶಿಸಿ ಕೆಲವು ಚಿತ್ರಗಳಲ್ಲಿ ನಟಿಸಿದರು. ಅವುಗಳಲ್ಲಿ ಮುಖ್ಯವಾದುವು. ಆರ್‍ಪಾರ್ (1954),  ಮಿಸ್ಟರ್ ಅಂಡ್ ಮಿಸೆಸ್ 55 (1955), ಸಿ.ಐ.ಡಿ. (1956), ಪ್ಯಾಸಾ (1957), ಟ್ವಲ್ವೋ ಕ್ಲಾಕ್ (1958), ಚೌದವಿಕಾ ಚಾಂದ್ (1960), ಸಾಹೀಬ್ ಬೀಬಿ ಔರ್ ಗುಲಾಮ್ (1962), ಸೌತೆಲಾಭಾಯಿ (1962), ಬಹುರಾನಿ (1963), ಭರೋಸಾ (1963), ಸಾಂಜ್ ಔರ್ ಸವೇರಾ (1964), ಸುಹಾಗನ್ (1964). ಇವೆಲ್ಲವೂ ಗುರುದತ್ತರ ಜನಪ್ರಿಯತೆಯನ್ನು ಶಿಖರಕ್ಕೇರಿಸಿದ ಚಿತ್ರಗಳು.

	ಬಾಜಿ ಚಿತ್ರದಿಂದ ಒಂದೊಂದೇ ಮೆಟ್ಟಲೇರುತ್ತ ಯಶಸ್ವಿ ಶಿಖರಕಂಡ ಇವರು ಬಾಜಿ ಚಿತ್ರದ ರೆಕಾರ್ಡಿಂಗ್ ಸಮಯದಲ್ಲಿ ಗಾಯಕಿ ಗೀತಾರಾಯ್ ಅವರ ಪ್ರೇಮದ ಬಲೆಯಲ್ಲಿ ಸಿಲುಕಿ ಅವರನ್ನು ವಿವಾಹವಾದರು (1953 ಮೇ 26). ಗುರುದತ್ ನಿರ್ಮಿಸಿದ ಚಿತ್ರಗಳು ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ bsÁಪು ಮೂಡಿಸಿವೆ. ಪ್ಯಾಸಾ, ಕಾಗಜ್ ಕೆ ಫೂಲ್, ಸಾಹೀಬ್ ಬೀಬಿ ಔರ್ ಗುಲಾಮ್ ಮೊದಲಾದುವು ಉತ್ತಮ ಹಾಡು, ಅಭಿನಯ, ನಿರ್ದೇಶನಗಳಿಂದ ಹೆಸರು ಮಾಡಿದುವು. ಸಾಹೀಬ್ ಬೀಬಿ ಔರ್ ಗುಲಾಮ್ ರಾಷ್ಟ್ರಪತಿಗಳ ರಜತ ಪದಕ ಪಡೆಯಿತು.

	ಕಲಾತ್ಮಕತೆ ಮತ್ತು ತಾಂತ್ರಿಕ ಶ್ರೀಮಂತಿಕೆ ಗುರುದತ್ತರ ಚಿತ್ರಗಳ ಜೀವಾಳ. ನೆರಳು ಬೆಳಕುಗಳನ್ನು ಕ್ಯಾಮರದಲ್ಲಿ ಸೆರೆಹಿಡಿಯುವ ಚಾಕಚಕ್ಯತೆ, ಕ್ಯಾಮರ ಕಣ್ಣಿನಲ್ಲಿರುವ ಶಕ್ತಿಯ ಸದ್‍ಬಳಕೆ, ಹಾಡು ಅಭಿನಯಗಳ ಸಮತೂಕ ನಿರ್ವಹಣೆ, ಪ್ರತಿಯೊಂದು ಫ್ರೇಮಿನಲ್ಲೂ ಜೀವ ತುಂಬುವ ಜಾಣ್ಮೆ, ಜೀವನದ ವಾಸ್ತವತೆಯನ್ನು ಚಿತ್ರಿಸುವ ಕಲೆಗಾರಿಕೆ ಇವೇ ಇವರ ಚಿತ್ರಗಳು ಜನಪ್ರಿಯವಾಗಲು ಕಾರಣವಾದುವು. ಇವರ ಚಿತ್ರಗಳು ಇಂದಿಗೂ ತಾಜಾತನ ಉಳಿಸಿಕೊಂಡಿವೆ. ಖ್ಯಾತಿಯ ಉತ್ತುಂಗದಲ್ಲಿರುವಾಗಲೇ ಜೀವನದಲ್ಲಿ ಜುಗುಪ್ಸೆಗೊಂಡು 1964 ಅಕ್ಟೋಬರ್ 10ರಂದು ಆತ್ಮಹತ್ಯೆ ಮಾಡಿಕೊಂಡರು.           	              (ಎಸ್.ಎಂ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ